ನದೀಬಳಸುಗಳು
ಪ್ರೌಢಾವಸ್ಥೆಯನ್ನು ತಲುಪಿದ ನದಿಯೊಂದರ ತಿರುವು ಮುರುವುಗಳು (ರಿವರ್ ಮಿಯಾಂಡರ್ಸ್; ಬೈಂಡಿಗ್ ಲೂಪ್ಸ್). ಗಟ್ಟಿಕಲ್ಲಿರುವ ಪ್ರದೇಶಗಳಲ್ಲಿ ಇವು ವಿರಳ. ನುಣುಪಾದ ಮರಳಿನಲ್ಲಿ ಅಥವಾ ಮೆಕ್ಕಲು ಮಣ್ಣಿನಲ್ಲಿ ಮುಪ್ಪಡಸಿದ ನದಿ ಬಲು ನಿಧಾನವಾಗಿ ಡೊಂಕುಡೊಂಕಾಗಿ ಹರಿಯುತ್ತದೆ. ನದಿ ಹರಿಯುವ ದಾರಿಯಲ್ಲಿ ಏನಾದರೂ ಅಡ್ಡಿಬಂದರೆ ನೀರಿನ ಹರಿವು ಅದನ್ನು ಬಳಸಿಕೊಂಡು ಮುಂದೆ ಸಾಗುತ್ತದೆ. ಆಗ ಅದರ ಚಲನಶಕ್ತಿ ಒಂದು ದಡದ ಬಳಿಯಿರುವುದಕ್ಕಿಂತಲೂ ಹೆಚ್ಚಾಗಿ ಮತ್ತೊಂದು ದಡದ ಮೇಲೆ ಕೇಂದ್ರೀಕೃತವಾಗುತ್ತದೆ. ಆದ್ದರಿಂದ ಶಕ್ತಿ ಒತ್ತಡಕ್ಕೆ ಈಡಾದ ದಡ ಬೇಗ ಸವೆಯುತ್ತದೆ ಮತ್ತು ಬಾಗುತ್ತದೆ. ವಿಶಾಲವಾದ ಪ್ರವಾಹ ಮೈದಾನದಲ್ಲಿ ಇಂಥ ನದೀಬಳಸುಗಳು ಸಾಮಾನ್ಯವಾಗಿ ಹೆಚ್ಚು. ಈ ಪ್ರದೇಶಗಳಲ್ಲಿ ನದೀಬಳಸುಗಳಿರುವ ಪಾತ್ರ ಪದೇ ಪದೇ ಮಾರ್ಪಾಡುಗೊಳ್ಳುವುದುಂಟು. ಹಾರಾಡುವ ವಿಮಾನಗಳಲ್ಲಿ ಕುಳಿತು ನೋಡಿದಾಗ ಈ ನದಿಯ ಬಾಗುಗಳು, ತಿರುವು ಮುರುವುಗಳು, ಕುಣಿಕೆಗಳು ಬಲು ಚೆನ್ನಾಗಿ ಕಾಣುತ್ತವೆ. ನದೀಬಳಸುಗಳ ಅಗಲ ಕೆಲವು ವೇಳೆ ಅನೇಕ ಕಿಲೊಮೀಟರುಗಳಷ್ಟಿರಲೂಬಹುದು. ಕರ್ನಾಟಕದಲ್ಲಿ ಹರಿಯುವ ಹೇಮಾವತಿ, ಕಾವೇರೀ ನದಿಗಳಿಗೆ ಇಂಥ ಬಳಸುಗಳು ಬಹಳ ಇವೆ.

	ಕಾಲಕ್ರಮದಲ್ಲಿ ನದೀಬಳಸಿನ ತಿರುವು ಅತ್ಯಧಿಕವಾದಾಗ, ಅದರ ಕಿರಿದಾದ ಕತ್ತಿನ ಮೂಲಕ ಕಾಲುವೆಯನ್ನು ಕೊರೆದುಕೊಂಡು ನದಿ ನೆಟ್ಟಗೆ ಹರಿಯುತ್ತದೆ. ಹೀಗಾಗುವುದು ಸಾಮಾನ್ಯವಾಗಿ ನದಿಯ ಪ್ರವಾಹಕಾಲದಲ್ಲಿ. ಆಗ ನದಿಯ ಜಾಡೇ ಬದಲಾಗುತ್ತದೆ. ಪ್ರವಹಿಸುವ ಉದ್ದ ಕಡಿಮೆಯಾಗಲೂಬಹುದು. ಹೀಗೆ ನದಿ ಕೊರೆದ ಕಾಲುವೆಯ ದಾರಿಯಲ್ಲಿ ಮೆಕ್ಕಲುಮಣ್ಣು ತುಂಬಿಕೊಂಡಾಗ ಶೃಂಗ ಚಂದ್ರಾಕಾರದ ಇಲ್ಲವೆ ಎತ್ತಿನ ಕೊಂಬಿನ ಇಲ್ಲವೆ ಕುದುರೆ ಲಾಳದ ಆಕಾರದ ಕೊಳ ಗೋಚರವಾಗುತ್ತದೆ. ಉತ್ತರ ಅಮೆರಿಕದ ಕೆಳಗಣ ಮಿಸಿಸಿಪ್ಪಿ ನದಿಯ ಉದ್ದಕ್ಕೂ ಇಂಥ ಕೊಳಗಳು ನೂರಾರು ಇವೆ. ನದಿಯಿಂದ ಬೇರ್ಪಟ್ಟ ಬಳಸುಗಳು. ಭೂಭಾಗದ ಚಲನವಲನಗಳಿಂದ ನದಿಯ ಪುನರುಜ್ಜೀವನವಾದಾಗ ಕಂಡುಬರುವ ಈ ನದೀಬಳಸುಗಳು ಬಹಳ ಕಿರಿದಾಗಿರುತ್ತದೆ.										(ಎ.ಎನ್.ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ